ಅಮದಳ್ಳಿ ಗ್ರಾಮವು ಕಾರವಾರ-ಅಂಕೋಲಾದ ನಡುವೆ ಇರುತ್ತದೆ.ಅಲ್ಲಿರುವ ದೇವತೆಗಳಿಗೂ ಮತ್ತು ನಮ್ಮ ಕುಟುಂಬಕ್ಕೂ ಹಲವು ಶತಮಾನಗಳಿಂದ ಅವಿನಾಭಾವ ಸಂಬಂಧವಿರುತ್ತದೆ.
ನಮ್ಮ ಕುಟುಂಬದ ಹಿಂದಿನ ತಲೆಮಾರಿನವರು ಗೋವಾ ಪ್ರಾಂತದಿಂದ ಸಮುದ್ರಮಾರ್ಗವಾಗಿ ವಲಸೆ ಬರುವಾಗ ಅಮದಳ್ಳಿ ಆಗಮಿಸಿದರು.ಅಲ್ಲಿರುವ ಬಂಟದೇವರು ಗ್ರಾಮದೇವತೆ ಎಂದು ಆರಾಧಿಸಲ್ಪಡುತ್ತಿದೆ.
ಸಾಮಾನ್ಯವಾಗಿ ಅಮದಳ್ಳಿಯಲ್ಲಿರುವ ಭೂದೇವಿಯ ಬಂಡಿಹಬ್ಬವು ಪ್ರತಿವರ್ಷ ವೈಶಾಖ ಮಾಸ ಶುದ್ಧ ಸಪ್ತಮಿಯಂದು ಅನಾದಿಕಾಲದಿಂದಲೂ ನಡೆಸಲಾಗುತ್ತಿದೆ.ನಮ್ಮ ಕುಟುಂಬದವರೂ ಸಹ ಬಂಡಿಹಬ್ಬದ ಧಾರ್ಮಿಕ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ.
ಪ್ರತಿವರ್ಷ ಹರಿದಿನದ ಸರತಿಯವರು ಕುಟುಂಬದ ಪರವಾಗಿ ಬಂಡಿಹಬ್ಬದಲ್ಲಿ ಭಾಗವಹಿಸುತ್ತಾರೆ. ಸಾಯಂಕಾಲದಲ್ಲಿ ಕಳಸದ ಮೆರವಣಿಗೆ ಪ್ರಾರಂಭವಾಗುವಾಗ ತೋರಣದ ಕೆಳಗೆ ನಿಂತು ದೇವರಿಗೆ ಮತ್ತು ಕಟ್ಟಿಗೆದಾರರಿಗೆ ಮಲ್ಲಿಗೆ ಹೂವಿನ ಹಾರವನ್ನು ನಮ್ಮಿಂದ ಸಮರ್ಪಿಸಲಾಗುತ್ತದೆ.ಈ ಮಾಲೆ ಹಾಕುವ ಅವಕಾಶ ಇರುವುದು ನಮ್ಮ ಕುಟುಂಬದವರಿಗೆ ಮಾತ್ರ ಎನ್ನುವುದು ಹೆಮ್ಮೆಯ ವಿಷಯ.
ಹಲವು ವರ್ಷಗಳ ಹಿಂದೆ ನಮ್ಮ ಕುಟುಂಬದ ಹಿರಿಯರು ಪ್ರತಿವರ್ಷ ಬಂಡಿಹಬ್ಬದಂದು ನಮ್ಮ ಕುಟುಂಬದ ಉಪನಯನವಾದ ಬ್ರಹ್ಮಚಾರಿಯಿಂದ ಹೂ ಆಡಿಸುವುದಾಗಿ ಹರಕೆ ಹೊತ್ತಿದ್ದರು.ಕಳಸ ದೇವಸ್ಥಾನದಲ್ಲಿ ಬ್ರಹ್ಮಚಾರಿಗೆ ಪೀತಾಂಬರ,ಮೈಮೇಲೆ ಕುಸುಮಾಲೆಯ ಹೂವು ಮತ್ತು ಹಣ್ಣುಗಳಿಂದ ಅಲಂಕಾರ ಮಾಡಿ,ಬಿದಿರಿನ ಬಿಲ್ಲು ಬಾಣವನ್ನು ಕೈಯಲ್ಲಿ ಕೊಟ್ಟು, ತಲೆಮೇಲೆ ಬಿದಿರಿನಿಂದ ತಯಾರಿಸಿದ ಶಿರಸ್ತ್ರಾಣವನ್ನು ತೊಡಿಸುತ್ತಾರೆ.ದೇವರ ಜೊತೆ ಮೆರವಣಿಗೆಯಲ್ಲಿ ಸುತ್ತು ಹಾಕುತ್ತಾ ಕೊನೆಯ ಹಂತದಲ್ಲಿ ಸಾವಿರಾರು ಜನರ ಹರ್ಷೋದ್ಗಾರಗಳ ನಡುವೆ ಕಳಸದ ದೇವಿಯ ಜೊತೆ ಬಂಡಿ ಏರುವ ದೃಶ್ಯ ನಯನ ಮನೋಹರವಾಗಿದೆ.
ಸಾಮಾನ್ಯವಾಗಿ ದೇವರ ಗರ್ಭಗುಡಿಯಲ್ಲಿ ಅರ್ಚಕರ ಹೊರತಾಗಿ ಇನ್ನಾರಿಗೂ ಪ್ರವೇಶ ಇರುವುದಿಲ್ಲ.ಆದರೆ ಈ ಸಮಯದಲ್ಲಿ ಭೂದೇವಿ ದೇವಸ್ಥಾನ ಮತ್ತು ಕಳಸ ದೇವಸ್ಥಾನದಲ್ಲಿ ನಮ್ಮ ಕುಟುಂಬದ ಬ್ರಹ್ಮಚಾರಿಗೆ ಗರ್ಭಗುಡಿಯ ಪ್ರವೇಶದ ಸುವರ್ಣಾವಕಾಶವಿರುವುದು ಬ್ರಹ್ಮಚಾರಿಯ ಸೌಭಾಗ್ಯವೇ ಸರಿ.
ಕೆಲವು ವರ್ಷ ಈ ಮಹತ್ಕಾರ್ಯದಲ್ಲಿ ಕುಟುಂಬದ ಬ್ರಹ್ಮಚಾರಿಯು ಭಾಗವಹಿಸಲು ನಿರಾಕರಿಸಿದ್ದರಿಂದ ಟ್ರಸ್ಟಿಗಳ ಕೋಪಕ್ಕೆ ಪಾತ್ರರಾಗಿದ್ದು ವಿಷಾದನೀಯ ಸಂಗತಿ.
ಇಂತಹ ಸೌಭಾಗ್ಯವನ್ನು ನಮ್ಮ ಕುಟುಂಬದ ಎಲ್ಲಾ ಬ್ರಹ್ಮಚಾರಿಗಳು ಪಡೆದು ಬಂಡಿ ಹಬ್ಬದಲ್ಲಿ ಭಾಗವಹಿಸಿ ಹರಕೆ ಹೊತ್ತ ಹಿರಿಯರ ಆಶೀರ್ವಾದ ಮತ್ತು ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಹಾರೈಕೆ.
Video
ಶ್ರೀಪಾದ.
30/04/2020.